ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದ್ರೋಣ ಕೇಂದ್ರಿತ ಕಾದಂಬರಿ, ಒಂದು ವಿವೇಚನೆ – ಡಾ ಕಾ ವೆಂ ಶ್ರೀನಿವಾಸಮೂರ್ತಿ

‘ತ್ಯಕ್ತ’ : ಒಂದು ವಿವೇಚನೆ

– ಡಾ ಕಾ ವೆಂ ಶ್ರೀನಿವಾಸಮೂರ್ತಿ

ಕೃತಿ : ’ತ್ಯಕ್ತ’
ಲೇಖಕರು: ಉದಯಕುಮಾರ ಹಬ್ಬು

ಭಾರತದಲ್ಲಿ ರಾಮಾಯಣವನ್ನು; ಅಂತೆಯೇ ಮಹಾಭಾರತವನ್ನು ಬರೆದವರಿಗೆ ಲೆಕ್ಕವಿಲ್ಲ. ಇದು ಭಾರತದ ಎಲ್ಲ ಭಾಷೆಗಳಲ್ಲಿಯೂ ಕಂಡಿದೆ. ಅಂತೆಯೇ ಬಹುತೇಕ ಎಲ್ಲ ಶತಮಾನಗಳಲ್ಲಿ ಸಹ ಕಂಡಿದೆ. ಬರಹದಲ್ಲಿ ಗದ್ಯ, ಪದ್ಯ ಅಂತೆಯೇ ಮೌಖಿಕ ನೆಲೆಗಳಲ್ಲಿ ಸಹ ಇದೆ. ಆದರೂ ಈ ನಿಟ್ಟಿನ ಬರಹಗಳು ಇನ್ನೂ ಮೂಡುತ್ತಿವೆಯೆಂದರೆ ಬರಹಗಾರರ ದಾಹ ಇನ್ನೂ ತೀರಿಲ್ಲ ಎನ್ನಿಸುತ್ತದೆ. ಅಂತೆಯೇ ಈ ಕಥನದ ಸಾಧ್ಯತೆ ಹೊಸ ಹೊಸ ಕಾಲಗಳಿಗೆ ಹೊಸ ಹೊಸ ಬರಹಗಾರರಿಗೆ ವಿಸ್ತರಿಸಿಕೊಳ್ಳುತ್ತಲೇ ಇದೆ ಎನಿಸುತ್ತದೆ. ಇದು ಯಾವುದೇ ಜನ ಮತ್ತು ಸಂಸ್ಕೃತಿ ಮೂಲದ ಕಥನಗಳ ಅನನ್ಯತೆ ಎನ್ನಿಸುತ್ತದೆ. ಈ ನೆಲೆಯಲ್ಲಿ ಹೀಗೂ ಒಂದು ಕಥನವಾಗಿ ಉದಯಕುಮಾರ ಹಬ್ಬು ಅವರ `ತ್ಯಕ್ತ’ ಕಾದಂಬರಿಯಿದೆ.
`ತ್ಯಕ್ತ’ -ಇದು ಮಹಾಭಾರತವನ್ನು ಮೂಲವಾಗಿರಿಸಿಕೊಂಡ ಕಥನವಾಗಿದೆ. ಇದು ಬಾಹ್ಯ ನೆಲೆಯಲ್ಲಿ ಕಾದಂಬರಿಯಾಗಿ ಕಂಡರೆ, ಆಂತರಿಕ ನೆಲೆಯಲ್ಲಿ ಆತ್ಮಕಥನವಾಗಿ ಕಾಣುತ್ತದೆ. ಆದರೆ ಇದನ್ನು ನೇರವಾಗಿ ಈ ಕೃತಿಯ ನಾಯಕನೇ ಬರೆದಿರುವುದರಿಂದ ಇದು ಕಾದಂಬರಿಯೇ ಸರಿ.
ಪ್ರಸ್ತುತ ಕೃತಿಯ ಕೇಂದ್ರ ಪಾತ್ರ ದ್ರೋಣ ಆಗಿದ್ದಾನೆ. ಈತ ತನ್ನ ಆತ್ಮ ಕಥೆಯನ್ನು ನಿರೂಪಿಸುವ ಕ್ರಮದಲ್ಲಿ ಇಲ್ಲಿಯ ಮಹಾಭಾರತದ ಕಥೆಯನ್ನು ನಿರೂಪಿಸುತ್ತ ಹೋಗುತ್ತಾನೆ. ಇಲ್ಲಿ ತಾನೊಂದು ಪಾತ್ರವೂ ಆಗಿದ್ದಾನೆ. ಅಂತೆಯೇ ಒಟ್ಟೂ ಕಥೆಯ ನಿರೂಪಕನೂ ಆಗಿದ್ದಾನೆ. ಇದನ್ನು ಕೇಳುವ ಸಹೃದಯನು ಓದುಗನಾಗಿದ್ದಾನೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿ ಹೇಳುವುದಾದರ, ಇಲ್ಲಿಯ ನಿರೂಪಕ `ಎಲೈ ಸಹೃದಯನೇ ಎಂದು ವೈಶಂಪಾಯನ ಮುನಿ ಕೇಳುವ ಜನುಮೇಜಯನೇ’ ಇಂಥ ಕಥನವು ಎಂದು ಸಂಭೋಧಿಸುವ ಹಾಗಿಲ್ಲ. ಹಾಗಾಗಿ ಇದು ಸ್ವಗತದ ಕ್ರಮದಲ್ಲಿದೆ ಎಂದು ಭಾವಿಸಬಹುದು. ಆದರೆ ಸ್ವಗತದ ನೆಲೆಯಲ್ಲಿ ಎಷ್ಟು ಮಾತಾಡಿಕೊಳ್ಳಲು ಸಾಧ್ಯ? ಇಷ್ಟು ದೀರ್ಘ ಕಥನವನ್ನು ಹೇಳಿಕೊಳ್ಳುವುದು ಸಹಜಸಾಧ್ಯಗೊಳ್ಳುವ ಸಂವಹನೆಯೇ? ಅಲ್ಲ, ಆದ್ದರಿಂದ ಇದು ಮೇಲ್ನೋಟಕ್ಕೆ ಸುದೀರ್ಘ ಎನ್ನಿಸಿದರೂ ವಾಸ್ತವದಲ್ಲಿ ಸಹೃದಯನನ್ನು ಸಂಬೋಧಿಸಿ ಬೆಳೆದ ಕಥನವೇ ಎನ್ನಿಸುತ್ತದೆ.
ಇಂಥ ಕಥನವು ದ್ರೋಣನಿಂದ ಆರಂಭಗೊಳ್ಳುತ್ತದೆ. `ನಾನು ದ್ರೋಣ,’ ನಾನು ಇಂತಹ ವಂಶದಲ್ಲಿ ಹುಟ್ಟಿದವನು ಇತ್ಯಾದಿಯಾಗಿ ಸ್ವಪರಿಚಯದ ಮೂಲಕ ತೆರೆದುಕೊಳ್ಳುತ್ತದೆ. ಕ್ರಮೇಣ ಈ ಮೂಲಕ ಇಡೀ ಮಹಾಭಾರತವೇ ತೆರೆದುಕೊಳ್ಳುತ್ತದೆ. ಅಂತಿಮವಾಗಿ ಇದು ಕೊನೆಗೊಳ್ಳುವುದು ತಾನು ಕುರುಕ್ಷೇತ್ರದಲ್ಲಿ ಸಾವನ್ನಪ್ಪಿ, ಸ್ವರ್ಗವಾಸಿ ಆದಾಗ. ಇದು ಇಲ್ಲಿಯ ಕಥನ ಆದರೆ ಈ ಕಥನವನ್ನು ದ್ರೋಣನೇ ನಿರೂಪಕನಾಗಿ ಹೇಳುವುದು ಇಲ್ಲಿಯ ತಂತ್ರ. ಇದು ಕೃತಿಯ ಒಂದು ಮಖ್ಯ ನೆಲೆ. ಅಂತೆಯೇ ಇಲ್ಲಿ ಅನಾವರಣಗೊಳ್ಳುತ್ತಿರುವುದು ಕೇವಲ ಕಥೆ ಮಾತ್ರವಲ್ಲ; ವಿಮರ್ಶೆ ಕೂಡಾ ಇದೆ. ಆ ವಿಮರ್ಶೆಯನ್ನು ಸಹಿತ ಮಾಡುತ್ತಿರುವುದು ದ್ರೋಣನೇ ಆಗಿದ್ದಾನೆ. ಆ ವಿಮರ್ಶೆ ಮತ್ತು ಕಥನದಲ್ಲಿ ತಾನು ಪಾತ್ರವೂ ಆಗಿ ಬಿಂಬಿತನಾಗಿದ್ದಾನೆ.

ಹೀಗೆ ದ್ರೋಣ ಇಲ್ಲಿ ದ್ವಿಪಾತ್ರವನ್ನು ನಿರ್ವಹಿಸುತ್ತಿದ್ದಾನೆ. ಒಂದು ಪಾತ್ರವಾಗಿ; ಇನ್ನೊಂದು ನಿರೂಪಕ ಮತ್ತು ವಿಮರ್ಶಕನಾಗಿ. ಇದು ಕೃತಿಯ ಸೋಪಜ್ಞ ನೆಲೆಯೂ ಹೌದು. ಕಾರಣ ಮಹಾಭಾರತದ ಕಥೆ ಯಾರಿಗೆ ಗೊತ್ತಿಲ್ಲ? ಹಾಗಾಗಿ ಗೊತ್ತಿರುವ ಕಥೆಯನ್ನು ಯಾವುದಾದರೂ ಒಂದು ಹೊಸತಾದ ನೆಲೆಯಲ್ಲಿ ಹೇಳುವುದು ಕೃತಿಕಾರನ ಸ್ವಂತಿಕೆಗೂ ಸವಾಲಿಗೂ ಸಂಬಂಧಪಟ್ಟ ವಿಚಾರವಲ್ಲವೇ? ಅಂತೆಯೇ ಅದು ಸಾಧ್ಯವಾಗದಾದಾಗ ಅದು ಸಹೃದಯರ ನಡುವೆ ಗೆದ್ದು ಉಳಿಯುವುದಾದರೂ ಹೇಗೆ?
ಹೀಗೆ ಕೃತಿ ಈಗಾಲೇ ಜನಜನಿತವಾದ ಕಥೆಯನ್ನು ಮುದ್ದಣ ಅಥವಾ ನಂದಳಿಕೆ ಲಕ್ಷ್ಮಿನಾರಾಯಣಪ್ಪ ತನ್ನ `ಶ್ರೀರಾಮಶ್ವಮೇಧದ’ ಕೃತಿಯನ್ನು, ಬಿ ಎಮ್ ಶ್ರೀಯವರು ಹೇಳುವಂತೆ `ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು’ ಎಂದು ಹೇಳುವಂತೆ ಹೊಸತಾದ ನೆಲೆಯಲ್ಲಿ ಸಾಗುತ್ತದೆ ಇದು ಇಲ್ಲಿಯ ವಿಶೇಷ. ಇದು ತಂತ್ರಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಈ ಕಥನ ತಂತ್ರದ ಸಾಫಲ್ಯದ ನೆಲೆಯಲ್ಲಿ ಓದುಗ ಏಕಕಾಲಕ್ಕೆ ಮಹಾಭಾರತದ ಕಥನವನ್ನು ಮತ್ತು ಅದರ ಬಗೆಗಿನ ವಿಮಶರ್ೆಯನ್ನೂ ಗ್ರಹಿಸುತ್ತ ಸಾಗುತ್ತಾನೆ. ಇಂತಹ ವಿಮಶರ್ೆಯಲ್ಲಿ ಮಾನವ ಸ್ವಭಾವದ ಒಳಸುಳಿಗಳ ಪರಿಚಯ, ಅಲ್ಲಿಯ ದ್ವೇಷ ಸಾಧನೆ, ಸ್ವಾರ್ಥ, ಅಹಂಕಾರ, ಸಮಾಜದ ಬಗೆಗಿನ ನಿರ್ಲಕ್ಷ, ಮುಂತಾದವುಗಳ ಸಾಕ್ಷಾತ್ ದರ್ಶನ ಉಂಟಾಗುತ್ತದೆ. ಅಲ್ಲದೇ ಯುದ್ಧವೆಂಬ ಕ್ರಮ ಮನುಷ್ಯನ ಅಹಂ ನ ಸಾಧನೆಗೆ ಬಳಕೆಯಾಗುವ ವಿಧಾನ, ಒಂದು ಶಸ್ತ್ರಾರ್ಥ ತಯಾರು ಕಮ್ಮಾರರ ಉದ್ಯಮಕ್ಕೆ ನೆರವಾಗುವ ಬಗೆ, ಅದರ ಜಾಗದಲ್ಲಿ ಇಂದು ವಿವಿಧ ಯುದ್ಧದ ಸಲಕರಣೆಗಳನ್ನು ತಯಾರು ಮಾಡುವ ಉದ್ಯಮವನ್ನು ಪೋಷಿಸುವ ಬಗೆ ಮುಂತಾದ ಅನೇಕ ಮನುಷ್ಯ ವಿರೋಧಿ ನೆಲೆಗಳ ಪರಿಚಯವಾಗುತ್ತದೆ. ಈ ನೆಲೆಯಲ್ಲಿ ಪ್ರಸ್ತುತ ಕೃತಿ ಕೇವಲ ಮಹಾಭಾರತದ ಕಥೆಯನ್ನು ಮಾತ್ರ ಅನಾವರಣ ಮಾಡುವುದಲ್ಲದೇ, ಅದರ ಅನೇಕ ಉಪಉತ್ಪನ್ನಗಳನ್ನು ಸಹ ಸಮರ್ಥವಾಗಿ ಅನಾವರಣ ಮಾಡುತ್ತದೆ.
ವ್ಯಾಸ ಭಾರತವನ್ನು ಕನ್ನಡಕ್ಕೆ ಪುನರ್ರಚಿಸಿದ ಏ. ಆರ್. ಕೃಷ್ಣ ಶಾಸ್ತ್ರಿಯವರ `ವಚನಭಾರತ’ದಲ್ಲಿ ರಾಜಮನೆತನಗಳ ಒಳಗಿನ ವ್ಯಕ್ತಿಗಳ ಸಂವೇದನೆಯ ಮಾತ್ರ ಪರಿಚಯವಾಗುತ್ತದೆ. ಆದರೆ ಈ ಕಾಲಕ್ಕೆ ಸಮಾಜದಲ್ಲಿ ಬಹುಭಾಗವಾಗಿ ಇದ್ದ ಜನಸಾಮಾನ್ಯರ ಒಲವು-ನಿಲುವು ಸಂವೇದನೆಗಳು ಈ ಭಾರತ ಕಥನದ ಸಂಬಂಧ ಯಾವ ಸ್ವರೂಪದಲ್ಲಿ ಇದ್ದವು ಎಂಬುದು ತಿಳಿಯುವುದಿಲ್ಲ. ಅಂತಹ ಕೊರತೆಯನ್ನು ಪ್ರಸ್ತುತ ಕೃತಿಯು ತುಂಬಿಕೊಡುತ್ತದೆ. ಇದರ ಭಾಗವಾಗಿ ಯುದ್ಧವು ಕೇವಲ ಎರಡು ರಾಜಮನೆತನಗಳ ನಡುವಿನ ವ್ಯಾಪಾರ ಮಾತ್ರವಾಗಿರದೆ ಅದು ಜನರ ನಡುವೆ ಹೆಚ್ಚಿದ ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅತ್ಯಾಚಾರ, ಹಿಂಸೆ, ದೊಂಬಿ, ಅರಾಜಕತೆ, ಲಾಭ; ಅಥವಾ ಲೋಭಕೋರತನ, ಇತ್ಯಾದಿಗಳ ಮೇಲೂ ಬೆಳಕು ಚೆಲ್ಲುತ್ತದೆ. ಕಪ್ಪು ಹಣ ಸಂಗ್ರಹಣೆ, ಕಳ್ಳ ದಾಸ್ತಾನು, ಬೆಲೆಯೇರಿಕೆ ಬಡವರು ಮಾತ್ರವಲ್ಲ ಅನಕೂಲಸ್ಥರು ಸಹ ಬೀದಿಪಾಲಾಗುವ, ಸಂಸಾರಸ್ಥ ಸ್ತ್ರೀಯರು ಸಹ ಹೊಟ್ಟೆ ಪಾಡಿಗಾಗಿ ಸೆರಗು ಹಾಕುವ ಚಿತ್ರಣಗಳು ಸವರ್ೇ ಸಾಮಾನ್ಯವಾಗಿ ಎಲ್ಲೆಡೆಯೂ ಕಾಣಲಾರಂಭಿಸುತ್ತದೆ. ಇದು ಯುದ್ಧ ಕಾಲದ ತೆರೆಮರೆಯ ಚಿತ್ರ. ಇದು ಸಹ ಪ್ರಧಾನವಾಗಿ ಪ್ರಸ್ತುತ ಕೃತಿಯಲ್ಲಿ ಅನಾವರಣಗೊಳ್ಳುತ್ತದೆ. ದ್ರೋಣ ಕಂಡ ಈ ಚಿತ್ರಣಗಳು ಕೇವಲ ಸ್ಯಾಂಪಲ್ ಎಂಬುದು ವಿದಿತ.
ಪ್ರಸ್ತುತ ಕೃತಿಯ ಸ್ತ್ರೀವಾದಿ ಸಂವೇದನೆ ನೆಲೆಗಳಿಗೂ ಸೂಕ್ತ ಸ್ಥಾನ ಸಂದಿದೆ. ಇವುಗಳ ಅನಾವರಣ ದ್ರೌಪದಿ; ಅದರಲ್ಲೂ ಮುಖ್ಯವಾಗಿ ದ್ರೋಣನ ಹೆಂಡತಿಯಾದ ಕೃಪಿಯ ಮೂಲಕ ಆಗಿದೆ.
ಕೃಪಿ ದ್ರೋಣನಿಗೆ ಕೇಳುವ ಪ್ರಶ್ನೆಗಳ ಮೂಲಕ ತಾನು ಗಂಡನಿಗೆ ಕೇವಲ ಭೋಗವಸ್ತುವಲ್ಲ; ಆತನ ಇಹ ಮತ್ತು ಮೋಕ್ಷ ಸಾಧನೆಗೆ ಒಂದು ಸಲಕರಣೆಯಲ್ಲ; ತಾನೂ ಒಬ್ಬ ಮನುಷ್ಯಳೇ; ತನಗೂ ಗಂಡಿನಂತೆ ಒಂದು ಅಸ್ತಿತ್ವವಿದೆ; ಅದಕ್ಕಾಗಿ ತಾನು ಗಂಡನ ಉಪಜೀವಳಲ್ಲ; ಸಹಜೀವಿ ಎಂಬಿತ್ಯಾದಿ ವೈಚಾರಿಕ ನೆಲೆಗಳು ಪ್ರಕಟಗೊಳ್ಳುತ್ತವೆ. ಇವುಗಳನ್ನು ಎದುರಿಸಿ ನಿಲ್ಲದ ಅಥವಾ ಗೆಲ್ಲದ ದ್ರೋಣನನ್ನು ಬಿಟ್ಟು ತಾನುಹೊರಟು ಹೋಗುತ್ತಾಳೆ. ಅಹಂಕಾರ ಮತ್ತು ದ್ವೇಷ ಸಾಧನೆಯಲ್ಲಿ ಮತ್ತು ಅದಕ್ಕಾಗಿಯೇ ಬೌದ್ಧಿಕ ಸಾಧನೆಗಳನ್ನು ಮಾಡುತ್ತಿದ್ದ ದ್ರೋಣನಿಗೆ ಸ್ವಅರಿಮೆ ಉಂಟಾಗುತ್ತದೆ. ಆದರೂ ಇದರ ಪರಿಣಾಮದಿಂದ ತನ್ನ ಬದುಕಿಗೆ ತಿರುವನ್ನು ಕೊಟ್ಟುಕೊಳ್ಳದೇ ಎಂದಿನ ದಾರಿಯಲ್ಲಿಯೇ ಸಾಗುತ್ತಾನೆ. ಅಲ್ಲಿ ಸಾಧಕನು ಸಂಸಾರಿಗನಾಗಬಾರದು ಎಂಬ ನಿಲುವನ್ನು ಸಹ ಪ್ರಕಟಿಸುತ್ತಾನೆ.
ಹೀಗೆ ದ್ರೋಣ ಇಲ್ಲಿ ಕೇಂದ್ರ ಪಾತ್ರವಾಗಿದ್ದಾನೆ; ಈ ಹಿಂದೆ ಹೇಳಿದಂತೆ ಅಲ್ಲದೇ ಪಾತ್ರವೂ ಆಗಿದ್ದಾನೆ. ಅಲ್ಲದೇ ತಾನೂ ಒಂದು ಪಾತ್ರವಾಗಿರುವ ಒಂದು ಮಹಾ ಕಥನದ ಸಾಕ್ಷಿ ಪ್ರಜ್ಞೆಯಾಗಿ ವಿಮರ್ಶಕನಾಗಿ ಇಲ್ಲಿ ಕಥಾನಿರೂಪಣೆಯಲ್ಲಿ ಕಂಡು ಬರುತ್ತಾನೆ. ಇಲ್ಲಿ ಬಹುತೇಕ ಎಲ್ಲ ಮುಖ್ಯ ಪಾತ್ರಗಳ ಚಿತ್ರಣ ಮತ್ತು ವಿಮಶರ್ೆ ಒಟ್ಟೊಟ್ಟಿಗೆ ನಡೆದಿದೆ. ಈ ನೆಲೆಯಲ್ಲಿ ತಾನು ಪ್ರಾಮಾಣಿಕ ಕಂಡ ಕಥೆಗಾರನೇ ಆಗಿದ್ದಾನೆ. ಹಾಗಾಗಿ ತಾನು ಸದ್ಗುಣಗಳ ಸಾಕಾರ ಮೂತರ್ಿಯಂತೆ ತನ್ನನ್ನು ಚಿತ್ರಿಸಿಕೊಳ್ಳದೆ ತಾನೇ ಹೇಳಿಕೊಳ್ಳುವಂತೆ ತಾನು `ಅಹಂಕಾರ, ದ್ವೇಷ, ಮತ್ತು ಸ್ವಾರ್ಥ ಸಾಧನೆಯಲ್ಲಿಯೇ ದಿನ ಕಳೆದೆನು’ ಎಂಬುದು ಇಲ್ಲಿ ಮುಖ್ಯವಾಗಿ ಗಮನಸೆಳೆಯುತ್ತದೆ. ಇದು ಒಟ್ಟೂ ಈ ವರೆಗಿನ ಆತ್ಮಕಥನಗಳ ಸಾಲಿನಲ್ಲಿ ಅಪರೂಪಕ್ಕೆ ಕಾಣುವ ಸ್ವವ್ಯಕ್ತಿತ್ವದ ರೇಖೆಯಲ್ಲಿ ಒಂದಾಗಿದೆ
ಹೀಗೆ ಕೃತಿಯ ಉದ್ದಕ್ಕೂ ದ್ರೋಣನೇ ಸಾಕ್ಷಿಪ್ರಜ್ಞೆಯಾಗಿ ತಾನು ಕಂಡಂತಹ ಮತ್ತು ಕಂಡಷ್ಟು ಭಾರತ ಕಥನವನ್ನು ನಿರೂಪಿಸುವ ಈ ಕಥನ ತಂತ್ರದಲ್ಲಿ ಇತರೇ ಪಾತ್ರಗಳು ಸಹ ತಮ್ಮ ಸಾಂದರ್ಭಿಕ ನಿರೂಪಣೆಯನ್ನು ಮಾಡುತ್ತಾನೆ ಸಾಗುತ್ತವೆ. ಹಾಗಾಗಿ ಮಾತುಗಾರಿಕೆಯಲ್ಲಿ ಸ್ವಲ್ಪ ವೈವಿಧ್ಯ ಕಂಡಿದೆ. ಆದರೂ ಎಲ್ಲ ಪಾತ್ರಗಳದ್ದು ಶಿಷ್ಟ ಭಾಷೆಯೇ. ಹೆಚ್ಚು ಭಾಷಾ ವೈವಿಧ್ಯವಿಲ್ಲ. ಇದು ಕೃತಿಯ ಇನ್ನೊಂದು ಇತಿ ಹಾಗೂ ಇತಿ. ಇದನ್ನು ಪ್ರಜ್ಞಾ ಪ್ರವಾಹ ತಂತ್ರದ ಒಂದು ಭಾಗ ಮಾತ್ರವೆನ್ನಬಹುದು.
ಒಟ್ಟಾರೆ ಕೃತಿಯ ಭಾಷೆ ಸ್ಫಟಿಕದ ಶಲಾಕೆಯಂತಿದೆ. ಹರಳು ಹುರಿದಂತೆ ಇಲ್ಲಿ ಪಾತ್ರಗಳಾಡುವ ಮಾತು ಇದೆ. ಕೆಲವೊಮ್ಮೆ ಕೆಲವು ಮಾತುಗಳು ಪುನರಾವರ್ತವೆಂದೆನ್ನಿಸಿದರೂ ಮಹಾ ಕಥನದಲ್ಲಿ ಒಂದು ಪಾತ್ರವು ಒಂದು ಮಾತನ್ನು ಸಾಂದರ್ಭಿಕವಾಗಿ ಬಳಸುವುದು ಅನಿವಾರ್ಯವೂ ಆಗಿರುತ್ತದೆ. ಪುನರಾವರ್ತನೆ ಸಹಿತ ಒಂದು ದೋಷವಾಗಿ ಕಾಣುವುದಿಲ್ಲ. ಈ ಬಗೆಯಲ್ಲಿ ಕಾಣುವ ಭಾಷೆ ಒಂದೇ ಓಟದಲ್ಲಿ ಅಥವಾ ಉಸಿರಿನಲ್ಲಿ ಹರಿದಂತೆ ಕಾಣುತ್ತದೆ. ಆದ್ದರಿಂದಲೇ ಈ ಕೃತಿಯಲ್ಲಿ ಓದಿಸಿಕೊಂಡು ಹೋಗುವ ಗುಣ ಉಳಿಯುತ್ತದೆ.
ಹೀಗೆ ಅನೇಕ ಸಕಾರಾತ್ಮಕ ನೆಲೆಗಳಲ್ಲಿ ಸಂಗತಗೊಳ್ಳುವ ಕೃತಿಯಲ್ಲಿ ಕೃತಿಕಾರನ ಕಾಣ್ಕೆ ಏನು? ಎಂದು ಯಾರಿಗಾದರೂ ಕಾಡುವ ವಿಚಾರವಿದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಕೃತಿಕಾರನಿಗೆ ದ್ರೋಣನ ಬದುಕು, ಮತ್ತು ಅನೇಕ ಇಕ್ಕಟ್ಟುಗಳಲ್ಲಿಯೇ ಮಿತಿಯಾದ ಬಗೆಯಲ್ಲಿ ವಿಕಾಸಗೊಂಡ ವ್ಯಕ್ತಿತ್ವ ಕಾಡಿದೆಯೇ ಎನ್ನಿಸುತ್ತದೆ. ಅಲ್ಲದೇ ಇಂದಿನ ಯುದ್ಧ ಕಾಲದ ಪರಿಣಾಮಗಳು ಸ್ತ್ರೀ ಸಂವೇದನಾ ನೆಲೆಗಳು, ಸಾಂಪ್ರದಾಯಿಕ ಶಿಷ್ಟ ಸಾಹಿತ್ಯದ ಓದು ಈ ಕೃತಿಕಾರರನ್ನು ಪ್ರಭಾವಿಸಿದೆಯೋ ಏನೋ? ಎನ್ನಿಸುತ್ತದೆ. ಆದ್ದರಿಂದ ದ್ರೋಣನ ವೀಕ್ಷಣೆ ಒಳಗಾದ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಆ ಭಾರತದ ಚದುರಂಗದಾಟದಲ್ಲಿ ತಾನೊಂದು ದಾಳವಾದ ಬಗೆ ಅಥವಾ ತಾನೇ ತನ್ನ ಚದುರಂಗದಾಟಕ್ಕೆ ಆ ಎರಡು ರಾಜಮನೆತನಗಳ ನಡುವೆ ಇದ್ದ ದ್ವೇಷವನ್ನು ದಾಳವಾಗಿ ಬಳಸಿದ ಬಗೆ ಕಾಡಿರಬೇಕು.
ಅದರ ಜೊತೆಗೆ ಬಡಬ್ರಾಹ್ಮಣ ಅನುಭವಿಸಿದ ಅಪಮಾನ, ಸಹ ತೀವ್ರವಾಗಿ ಕಾಡಿರಬೇಕು. ಈ ಅನೇಕ ಊಹನಾ ನೆಲೆಗಳ ಮೇಲೆ ಕೃತಿಕಾರ ತಾನೊಂದು ಕಥನ ತಂತ್ರವನ್ನು ನಿಮರ್ಿಸಿಕೊಂಡು ಅದರಲ್ಲಿ ವ್ಯಾಖ್ಯಾನ ಸಹಿತವಾದ ಭಾರತ ಕಥೆಯನ್ನು ಹೇಳಿರಲು ಪ್ರೆಯತ್ನಿಸಿದಂತಿದೆ. ಅಂತೆಯೇ ವಾರಾನ್ನದಲ್ಲಿ ಜೀವಿಸಿದ ಬಡಬ್ರಾಹ್ಮಣೊಂದೆಡೆಯಾದರೆ ವಾರಾನ್ನವೂ ಸಿಗದ ದೊಡ್ಡ ಶೂದ್ರ ಸಮುದಾಯದ ಬಗೆಗಿನ ಚಿಂತನೆಯ ಮೂಲದಲ್ಲಿ ಭಾರತೆದ ಸಾವಿರಾರು ವರ್ಷಗಳ ಸಾಮಾಜಿಕ ಬದುಕನ್ನು ಮತ್ತೊಮ್ಮೆ ಯೋಚಿಸಲು ಅವಕಾಶವಿದೆಯೆನ್ನಿಸುತ್ತದೆ. ಆದರೂ ಅಪಮಾನ ಯಾರಿಗೇ ಆದರೂ ಅದು ನೋವಿನ ಸಂಗತಿಯೇ. ಅಂತಹ ಸಾಮಾಜಿಕ ಅವಸ್ಥೆ ಇದ್ದಾಗ ಮನುಷ್ಯರಾದ ಯಾರಾದರೂ ತಲೆ ತಗ್ಗಿಸಲೇ ಬೇಕಾಗುತ್ತದೆ. ಆದರೆ ದುರಂತವೆಂದರೆ ಇಂತಹ ವ್ಯವಸ್ಥೆಯ ಬಗ್ಗೆ ವಿಸ್ಮೃತಿಯನ್ನು ಮೂಡಿಸುವ ಸಂಚು-ಹುನ್ನಾರಗಳು ಇಂದು ನಮ್ಮೊಂದಿಗಿವೆ. ಇದರ ಮಾಯಾಜಾಲಕ್ಕೆ ಬಹುಜನ ಸಮುದಾಯದ ಅಮಾಯಕರೂ, ಮುಗ್ಧರೂ ಇಂದು ಬಲಿಯಾಗುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತಿಕೆ ಮೆರೆಯಬೇಕು. ಅಂಥಲ್ಲಿ ಅಧರ್ಮವೆ ಂಬ ಧರ್ಮ, ಕರ್ಮ, ವಣಾಶ್ರಮ ಇತ್ಯಾದಿ ಎಲ್ಲ ಮನುಷ್ಯ ವಿರೋಧಿಗಳು ಪುನಃ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನ ವಾಗ್ವಾದಗಳಿಗೆ ಸಹ ಪ್ರೇರಣೆ ನೀಡುವ `ತ್ಯಕ್ತ’ದಂತಹ ಕೃತಿಗಳು ಎಂದಿಗೂ ಸ್ವಾಗತಾರ್ಹ. ಇವು ಸಾಹಿತ್ಯ ಕೃತಿಗಳಾಗಿ ಸಹ ಯಶಸ್ವಿಯಾಗಿರುವುದು ಇಂತಹ ಸಾಧ್ಯತೆಗಳನ್ನು ಹೊಮ್ಮಿಸುತ್ತವೆ.
ಲೇಖಕರು- ಡಾ. ಕಾ. ವೆಂ. ಶ್ರೀನಿವಾಸಮೂರ್ತಿ, ಪ್ರಾಧ್ಯಾಪಕರು, ಕನ್ನಡ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
 

‍ಲೇಖಕರು G

12 May, 2014

1 Comment

  1. Kiran

    “ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು” was not said by Prof BM Sree; it was Prof SV Ranganna.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading